ನವಿಲು ಕೋಗಿಲೆಯಂತೆ ಹಾಡಲಾರದು, ಅಂತೆಯೇ ಕೋಗಿಲೆ ನವಿಲಿನಂತೆ ನಾಟ್ಯವಾಡದು, ಜಗತ್ತಿನಲ್ಲಿ ಪ್ರತಿಯೊಬ್ಬನಲ್ಲೂ ಒಂದೊಂದು ತೆರನಾದ ಸಾಮರ್ಥ್ಯವುಂಟು ತನ್ನಲ್ಲಿಲ್ಲದ ಸಾಮರ್ಥ್ಯಕ್ಕಾಗಿ ಕೊರಗದೇ, ಇದ್ದದ್ದನ್ನು ಉಪಯೋಗಿಸಿಕೊಳ್ಳುವುದೇ ಜಾಣತನ - "ಅರ್ಥರ್ ಸನ್ ಕ್ಲಾಸ್"

Thursday, February 6, 2014

ಶಿಕ್ಷಕರಾಗಿ ನಮ್ಮ ವಿಶಿಷ್ಟ ಅನುಭವಗಳನ್ನು ಹಂಚಿಕೊಳ್ಳೋಣ

ಆತ್ಮೀಯ ಶಿಕ್ಷಕರೇ ಶಿಕ್ಷಕ ವೃತ್ತಿಗೆ ಬಂದಿರುವ ನಾವು ನಮ್ಮ ಸೇವಾವಧಿಯಲ್ಲಿ ಅನೇಕ ಅನುಭವಗಳನ್ನು ಹೊಂದಿರುತ್ತೇವೆ. ಅಂತಹ ಅನುಭವಗಳಲ್ಲಿ ಕೆಲವೊಂದು ವಿಶಿಷ್ಟ ಹಾಗೂ ನಮ್ಮ ಬದುಕಿಗೆ ಮಾರ್ಗದರ್ಶಕವಾಗಿತ್ತವೆ .ಅಂತಹ ಅನುಭವಗಳನ್ನು ಇದ್ದರೇ ಚಿಂತಕರ ಚಾವಡಿಯಲ್ಲಿ ಹಂಚಿಕೊಳ್ಳೋಣ. ಇದರಿಂದ ನಾವು ಮಕ್ಕಳನ್ನು ನೋಡುವ ದೃಷ್ಟಿಕೋನ ಬದಲಾಗಬಹುದು ಎಂಬುದು ನನ್ನ ಬಾವನೆ.

________________________________________________________________________________________



ಮೊದಲು ನನ್ನ ಅನುಭವವನ್ನು ಹಂಚಿಕೊಳ್ಳುತ್ತೇನೆ.

ನಾನು ಶಿಕ್ಷಕ ವೃತ್ತಿ ಪ್ರಾರಂಭಿಸಿದ್ದು ಪ್ರಾಥಮಿಕ ಶಾಲೆಯ ಶಿಕ್ಷಕನಾಗಿ ಮತ್ತು ಮುಖ್ಯ ಶಿಕ್ಷಕನಾಗಿ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂನ ಖಾಸಗಿ ಶಿಕ್ಷಣ ಸಂಸ್ಥೆ ಸಾಧನ ವಿದ್ಯಾಕೇಂದ್ರದಲ್ಲಿ ಶಿಕ್ಷಕನಾಗಿ ವೃತ್ತಿ ಪ್ರಾರಂಭಿಸಿದೆ. ಆಗ ಆದ ಒಂದು ಅನುಭವ ನನ್ನ ವೃತ್ತಿ ಜೀವನಕ್ಕೆ ಮಾರ್ಗದರ್ಶನ ಎಂದರೂ ತಪ್ಪಲ್ಲ.

 ಆನಂದಪುರಂನ ಶಿಶುವಿಹಾರ ಹಾಗೂ ಮುಖ್ಯಶಿಕ್ಷಕರ ಕಛೇರಿ ಒಂದೇ ಕಟ್ಟಡದಲ್ಲಿತ್ತು. ಆಗ ಅಲ್ಲಿ ಶಿಶುವಿಹಾರದ ಒಬ್ಬ ವಿದ್ಯಾರ್ಥಿ ಚೇತನಕುಮಾರ  ಒಂದು ದಿನ ಇದ್ದಕ್ಕಿದ್ದ ಹಾಗೇ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದ. ಎಲ್ಲಾ ಶಿಕ್ಷಕರೂ ಭಯಬೀತರಾಗಿದ್ದರು. ನನಗೂ ಹೊಸ ಅನುಭವ. ಏನೆಂದು ನೋಡಲು ಹೋದೆ. ಆಗ ಆತ ಶಿಶುಮಂದಿರದ ಮಕ್ಕಳ ಮೇಲೆ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದ. ಆತನ ಹತ್ತಿರ ಯಾರೂ ಹೋಗುವಂತಿಲ್ಲ. ವಿಚಿತ್ರ ರೀತಿಯಲ್ಲಿ ಹೊಡೆಯುವುದು. ಹಾಗೂ ಪರಚುವುದನ್ನು ಮಾಡುತ್ತಿದ್ದ. ಶಿಕ್ಷಕಿಯರು ದೂರ ನಿತ್ತು ಹೆದರುತ್ತಿದ್ದರು. ನನಗೂ ಹೊಸ ಅನುಭವವಾದ್ದರಿಂದ ದೂರ ನಿಂತು ಸ್ಪಲ್ಪ ಹೊತ್ತು ನೋಡಿದೆ. ನಂತರ ಆತನಿಂದ ಸ್ಪಲ್ಪ ದೂರ ನಿತ್ತು ಉಳಿದ ಮಕ್ಕಳಿಗೆ ನಿಧಾನವಾಗಿ ಗದರಿಸಿದೆ. ಯಾಕೆ ಅವನ ಸುದ್ಧಿಗೆ ಹೋಗುತ್ತಿರಿ. ಆತ ಏನು ಮಾಡುವುದಿಲ್ಲ ಸುಮ್ಮನಿರಿ ಎಂದು ಆತನಿಗೆ ಕೇಳಿಸುವ ಹಾಗೆ ಗದರಿಸಿದೆ. ನಂತರ ನಿಧಾನವಾಗಿ ಆತನನ್ನು ಹತ್ತಿರ ಕರೆದೆ. ಆದರೇ ಆತ ಪ್ರತಿಕ್ರಿಯೆ ನೀಡಲಿಲ್ಲ. ಪ್ರತಿಯಾಗಿ ವಿಚಿತ್ರ ರೀತಿಯಲ್ಲಿ ನೋಡಿದ. ನಂತರ ಮತ್ತೆ ನಿಧಾನವಾಗಿ ಬಾ ಎಂದು ಕರೆದೆ. ಆತನಿಗೆ ಏನೋ ನಂಬಿಕೆ ಬಂದಹಾಗೇ ಆಗಿ ಹತ್ತಿರ ಬಂದ. ನಿಧಾನವಾಗಿ ಆತನ ಬೆನ್ನಿನ ಮೇಲೆ ಕೈ ಹಾಕಿ ಸವರಿದೆ. ನನ್ನ ತೊಡೆಯ ಮೇಲೆ ಕೂರಿಸಿ ಸುಮಾರು 10 ನಿಮಿಷ ಬೆನ್ನನು ಸವರಿದೆ. ಸ್ಪಲ್ಪ ಹೊತ್ತಿನ ನಂತರ ಆತ ಮೊದಲಿನ ಸ್ಥಿತಿಗೆ ಬಂದ.

 ಇದೇ ರೀತಿ ಅನುಭವ ಅನೇಕ ಸಲ ಆಯಿತು. ಆತ ಒಂದನೇ ತರಗತಿಗೆ ಬಂದ ಅಲ್ಲಿ ಒಮ್ಮೆ ಒಬ್ಬ ಶಿಕ್ಷಕರು ಆತನಿಗೆ ಹೊಡೆದಾಗ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡು ಅವರ ಕಾಲನ್ನು ಚಿವುಟಲು ಪ್ರಾರಂಭಿಸಿದ. ಆಗ ಆ ಶಿಕ್ಷಕರು ಕೂಗಲು ಪ್ರಾರಂಭಿಸಿದರು. ತಕ್ಷಣ ಮಕ್ಕಳು ಕೂಗೂತ್ತ ನನ್ನ ಬಳಿ ಬಂದಾಗ ತಕ್ಷಣ ಓಡಿದೆ. ಹೊದ ನಂತರ ನಿಧಾನವಾಗಿ ಆತನನ್ನು ಕರೆದು ಎಂದಿನಂತೆ ನನ್ನ ತೊಡೆಯ ಮೇಲೆ ಕೂರಿಸಿಕೊಂಡು ಬೆನ್ನನ್ನು ಸವರಲು ಪ್ರಾರಂಭಿಸಿದೆ. ನಂತರ ಆತ ಯತಾಸ್ಥಿತಿಗೆ ಬಂದ. ಇದೇ ರೀತಿ ಶಾಲೆಯ ಆಂಗ್ಲ ಶಿಕ್ಷಕಿಯೊಬ್ಬರಿಗೆ ಕೈಯೆಲ್ಲ ಪರಚಿ ರಕ್ತ ಬರುವಂತೆ ಮಾಡಿದ್ದ. ನಮಗೆ ಆತ ಸಮಸ್ಯಾತ್ಮಕ ವ್ಯಕ್ತಿಯಾಗಿ ಕಂಡು ಬಂದ . ಈಗ ನಾವು ಆತನ ಸಮಸ್ಯೆಗೆ ಕಾರಣವನ್ನು ಮತ್ತು ಪರಿಹಾರ ಹುಡುಕಲು ಪ್ರಾರಂಭಿಸಿದೆವು. ಆತನ ತಂದೆ ತಾಯಿ ಸಂಬಂಧಿಕರನ್ನು ವಿಚಾರಿಸಿದಾಗ ನಮಗೆ ಅದರ ಕಾರಣ ತಿಳಿಯಿತು. ಆತನ ವರ್ತನೆಗೆ ಕಾರಣ ಒಂದು ದಿನ ಆತನ ತಂದೆ ಯಾವುದೋ ತಪ್ಪಿಗೆ ತಮ್ಮ ಬೆಲ್ಟ್ ನಿಂದ ಹೊಡೆದಿದ್ದರಂತೆ ಅದು ಆತನ ಮನಸ್ಸಿನ ಮೇಲೆ ಬಾರಿ ಪರಿಣಾಮ ಬೀರಿ ಆತನಿಗೆ ಯಾರಾದರೂ ಹೊಡೆಯುವುದು ಅಥವಾ ಮನಸ್ಸಿಗೆ ಘಾಸಿಗೊಳಿಸಿದರೆ ತಕ್ಷಣ ಆತನಿಗೆ ರೋಷ ಬಂದು ತನ್ನ ಮೇಲೆ ತನಗೆ ನಿಯಂತ್ರಣವನ್ನು ಕಳೆದುಕೊಂಡು ಆಕ್ರಮಕಾರಿಯಾಗಿ ವರ್ತಿಸುತ್ತಿದ್ದ. ಇದು ತಿಳಿದ ಮೇಲೆ ನಾನು ನನಗೆ ಗೊತ್ತಿರುವ ವೈದ್ಯ ರು ಹಾಗೂ ಶಿಶು ಶಿಕ್ಷಣ ತಜ್ಞರು ಆಗಿದ್ದ ಉಪೇಂದ್ರ ಶಣೈಯವರ ಸಮೀಪ ಈ ಬಗ್ಗೆ ಚರ್ಚಿಸಿದೆ. ಆಗ ಅವರು ನೀವು ಮಾಡುತ್ತಿರುವ ಕ್ರಮ ಸರಿಯಾಗಿದೆ. ಆತನಿಗೆ ಪ್ರೀತಿ ತೋರಿಸಿ. ಆತನ ತಂದೆ ತಾಯಿಯವರಿಗೂ ಈ ಬಗ್ಗೆ ಮಾಹಿತಿ ನೀಡಿ ಆತನಲ್ಲಿ ಆತ್ಮವಿಶ್ವಾಸ ತುಂಬುವ ಹಾಗೆ ನಡೆದುಕೊಳ್ಳಿ ಎಂದು ಹೇಳಿದರು. ಆಗ ನಾವು ಎಲ್ಲಾ ಶಿಕ್ಷಕರು ಮತ್ತು ಶಾಲೆಯ ಎಲ್ಲಾ ಮಕ್ಕಳಿಗೂ ಈ ಬಗ್ಗೆ ಸ್ಪಷ್ಟವಾದ ಸೂಚನೆ ನೀಡಿದೆವು. ಚೇತನ್ ಗೆ ಯಾರು ಮನಸ್ಸಿಗೆ ನೊವಾಗದಂತೆ ನಡೆದುಕೊಳ್ಳಬೇಕು. ಅಲ್ಲದೆ ಆತನನ್ನು ಆಗಾಗ ಚಿಕ್ಕ ಚಿಕ್ಕ ವಿಚಾರಕ್ಕೂ ಹೊಗಳುವುದು, ಅತನನ್ನು ತರಗತಿಯ ಎಲ್ಲಾ ಚಟುವಟಿಕೆಗಳಿಗೂ ಮುಂದಾಳಾಗಿ ಮಾಡುವುದು ಮಾಡಿದೆವು. ಇದಕ್ಕೆ ಮಕ್ಕಳ ಸಹಕಾರ ತುಂಬಾ ಉತ್ತಮ ರೀತಿಯಲ್ಲಿ ದೊರೆಯಿತು. ಸುಮಾರು ಎರಡು ವರ್ಷಗಳ ಕಾಲ ಇದು ಮುಂದುವರಿಯಿತು. ನಿಧಾನವಾಗಿ ಆತನ ವರ್ತನೆ ಬದಲಾಯಿತು.             

       ಈಗ ಆತ ಸಂಪೂರ್ಣ ಬದಲಾಗಿದ್ದಾನೆ. ಈಗ ಆತ ಪ್ರಥಮ ಪಿಯೂಸಿ ಓದುತ್ತಿದ್ದಾನೆ. ಎಲ್ಲರಿಗೂ ಸಮಸ್ಯೆಯಾಗಿದ್ದ ಆ ಹುಡುಗ ಶಿವಮೊಗ್ಗ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮೊದಲ ಸ್ಥಾನ ಪಡೆದಿದ್ದ. ಎಸ್.ಎಸ್.ಎಲ್.ಸಿ.ಯಲ್ಲಿ 94% ಅಂಕಗಳಿಸಿ ಶಾಲೆಗೆ ಕೀರ್ತಿತಂದಿದ್ದಾನೆ.

    

No comments: