ನವಿಲು ಕೋಗಿಲೆಯಂತೆ ಹಾಡಲಾರದು, ಅಂತೆಯೇ ಕೋಗಿಲೆ ನವಿಲಿನಂತೆ ನಾಟ್ಯವಾಡದು, ಜಗತ್ತಿನಲ್ಲಿ ಪ್ರತಿಯೊಬ್ಬನಲ್ಲೂ ಒಂದೊಂದು ತೆರನಾದ ಸಾಮರ್ಥ್ಯವುಂಟು ತನ್ನಲ್ಲಿಲ್ಲದ ಸಾಮರ್ಥ್ಯಕ್ಕಾಗಿ ಕೊರಗದೇ, ಇದ್ದದ್ದನ್ನು ಉಪಯೋಗಿಸಿಕೊಳ್ಳುವುದೇ ಜಾಣತನ - "ಅರ್ಥರ್ ಸನ್ ಕ್ಲಾಸ್"

Tuesday, October 28, 2014

ತಿರಸ್ಕಾರ ಮೆಟ್ಟಿ ನಿಂತ ಡೇವಿಡ್


ತಿರಸ್ಕಾರ ಮನಸ್ಸನ್ನು ಕುಗ್ಗಿಸುತ್ತದೆ, ಆತ್ಮವಿಶ್ವಾಸ ಕಡಿಮೆ ಮಾಡುತ್ತದೆ. ತಿರಸ್ಕಾರವನ್ನು ಎದುರಿಸಿದ ಮನುಷ್ಯ ಮಾಡುವ ಒಳ್ಳೆಯ ಕಾರ್ಯವನ್ನು ತೊರೆದು ನಿಷ್ಕ್ರಿಯನಾಗುವ ಸಂದರ್ಭ­ಗಳೂ ಅನೇಕ. ಬದುಕಿನಲ್ಲಿ ತಿರಸ್ಕಾರ ಎದುರಿಸಿ ಪುಟದೆದ್ದು ನಿಲ್ಲದವನು ಯಾವನೂ ನಾಯಕನಾಗಲಾರ. ನಾಯಕ­ರಾದ­ವರು ತಿರಸ್ಕಾರವನ್ನೇ ಮೆಟ್ಟಲಾಗಿ ಮಾಡಿಕೊಂಡು ಮೇಲೆದ್ದು ಸಾಧಕ­ರಾಗುತ್ತಾರೆ.
ಬೈಬಲ್ಲಿನ ಕಥೆ­ಗಳಲ್ಲಿ ಡೇವಿಡ್ ಕಥೆ ಬಹಳ ಮಾರ್ಮಿಕ­ವಾ­ದದ್ದು. ಡೇವಿಡ್ ತನ್ನ ಜೀವನದಲ್ಲಿ ಅನುಭವಿಸಿದಷ್ಟು ತಿರಸ್ಕಾರ­ವನ್ನು ಯಾರೂ ಅನು­ಭವಿ­ಸಿ­ರಲಿಕ್ಕಿಲ್ಲ. ಇಸ್ರೇಲಿನ ರಾಜನಾಗಿದ್ದ ಸೌಲನ ಆಡಳಿತವನ್ನು ದೇವರು ಮೆಚ್ಚ­ಲಿಲ್ಲ. ನಿನ್ನ ಬದಲಾಗಿ ನಾನು ಒಪ್ಪುವ ಒಬ್ಬನನ್ನು ರಾಜನನ್ನಾಗಿ ಮಾಡು­ತ್ತೇನೆ ಎಂದು ತಿಳಿಸಿ ಕಾರ್ಯಕ್ಕೆ ಪ್ರವಾದಿ ಸಾಮ್ಯುವೆಲ್‌­ನನ್ನು ನಿಯಮಿಸಿದ. ಅವನಿ­ಗಿದ್ದ ಕರ್ತವ್ಯವೆಂದರೆ ಬೆತ್ಲೆಹೆಮ್ನಲ್ಲಿದ್ದ ಜೆಸ್ಸಿಯ ಮನೆಗೆ ಹೋಗಿ ಅವನ ಒಬ್ಬ ಮಗನನ್ನು ರಾಜನನ್ನಾಗಿ ಮಾಡುವುದು. ಜೆಸ್ಸಿಗೆ ಏಳು ಜನ ಗಂಡುಮಕ್ಕಳು. ಅದ­ರಲ್ಲಿ ಕಡೆಯವನು ಡೇವಿಡ್. ಅವನ ತಂದೆಯೇ ಅವನನ್ನು ತಿರಸ್ಕರಿಸಿ ಬಿಟ್ಟಿದ್ದ.
ಹುಡುಗ ಕುರಿಕಾಯುವುದನ್ನು ಬಿಟ್ಟರೆ ಯಾವುದಕ್ಕೂ ಪ್ರಯೋಜನ­ವಿಲ್ಲ­­ವೆಂಬುದು ಅವನ ಮತ. ದಯವಿಟ್ಟು ಒಂದು ಕ್ಷಣ ಡೇವಿಡ್ ಸ್ಥಾನದಲ್ಲಿ ನಿಂತು ಯೋಚಿಸಿ, ಅದೆಂಥ ಹೀನ ಪರಿಸ್ಥಿತಿ. ತಂದೆ ತನ್ನ ಏಳೂ ಮಕ್ಕಳನ್ನು ಕರೆದು ಅದ್ಭುತ­ವಾದ ವಿಷಯ ತಿಳಿಸುತ್ತಾನೆ. ‘ಇಂದು ನಮ್ಮ ಮನೆಗೆ ಪ್ರವಾದಿ ಸಾಮ್ಯು­ವೆಲ್ ಬರಲಿದ್ದಾರೆ. ನನ್ನ ಮಕ್ಕಳಲ್ಲಿ ಒಬ್ಬನನ್ನು ಇಸ್ರೇಲಿನ ರಾಜನನ್ನಾಗಿ ಮಾಡು­ತ್ತಾರೆ. ಆದ್ದರಿಂದ ನೀವೆಲ್ಲ ಚೆನ್ನಾಗಿ ಅಲಂಕಾರ ಮಾಡಿ­ಕೊಂಡು ಸಿದ್ಧರಾಗಿರಿ. ಯಾರಿಗೆ ದೈವ ಒಲಿಯುತ್ತದೆಯೋ ಹೇಳುವುದೆಂತು? ಆದರೆ ಡೇವಿಡ್, ನೀನು ಇಲ್ಲಿ ಇರಬೇಕಿಲ್ಲ, ನಿಷ್ಪ್ರಯೋಜಕ ನೀನು.
ಹೊರಡು ನೀನು ಕಾಡಿಗೆ ಕುರಿ­ಗಳೊಂ­ದಿಗೆ. ನಿನ್ನ ಅಣ್ಣಂದಿರು ಆರು ಜನ ಇಲ್ಲಿದ್ದರೆ ಸಾಕು’. ಹುಡುಗ ತಲೆ ತಗ್ಗಿಸಿ ಕಾಡಿಗೆ ನಡೆದ. ಡೇವಿಡ್ ಅಣ್ಣಂದಿರೆಲ್ಲರೂ ಅವನನ್ನು ತಿರಸ್ಕರಿ­ಸಿದರು. ಈತ ಬೆಳೆ ಬೆಳೆಸಿ ಕಾಳುಗಳನ್ನು ತೆಗೆದುಕೊಂಡು ಅಣ್ಣಂದಿರ ಮನೆಗೆ ಹೋದರೆ, ಕಾಳು­ಗಳನ್ನು ತೆಗೆದು­ಕೊಂಡು ಇವನನ್ನು ಹೊರಗೆ ತಳ್ಳಿಬಿಡು­ವರು, ನೀನೇಕೆ ಇಲ್ಲಿಗೆ ಬಂದೆ? ಕುರಿ ತೆಗೆದುಕೊಂಡು ಕಾಡಿಗೆ ಹೋಗು ಎಂದು ಅಪಮಾನಿಸುವರು. ರಾಜ­ನಾ­ಗಿದ್ದ ಸೌಲ ಕೂಡ ತುಂಬ ಅಪಮಾನ ಮಾಡಿದ. ತನಗೆ ಬೇಕಾದಾಗ ಇವ­­ನ್ನು ಕರೆಸಿ­ಕೊಂಡು ಇವನು ನುಡಿಸುವ ವಾದ್ಯವನ್ನು ಕೇಳಿ ಸಂತೋಷ­ಪಡುವ ಮತ್ತು ಮರುಕ್ಷಣವೇ ಭರ್ಜಿಯಿಂದ ಚುಚ್ಚಿ ಓಡಿಸಿ ಬಿಡುವ.
ಆದರೆ, ಪ್ರವಾದಿ ಸಾಮ್ಯುವೆಲ್ ಬಂದು ಜೆಸ್ಸಿಯ ಎಲ್ಲ ಮಕ್ಕಳನ್ನು ಒಬ್ಬೊಬ್ಬ­­ನ್ನಾಗಿ ಕರೆದ. ಅವನ ಮನಸ್ಸಿನಲ್ಲಿ ಭಗವಂತ ಕುಳಿತು, ಇವನಲ್ಲ, ಇವನಲ್ಲ ಎಂದು ಹೇಳುತ್ತಲೇ ಬಂದ. ಆಗ ಒಬ್ಬ ಮಗ ಎಲಿಯಾಬ್ ಎದುರು ಬಂದ. ಅವನ ಭವ್ಯ ಆಕೃತಿಯನ್ನು ನೋಡಿ ಒಂದು ಕ್ಷಣ ಸಾಮ್ಯುವೆಲ್ ಕೂಡ ಇವನೇ ರಾಜ­ನಾಗುವವನು ಎನ್ನಿಸಿತು. ತಕ್ಷಣ ಅವನ ಮನಸ್ಸಿನಲ್ಲಿ ಭಗವಂತ ಹೇಳಿದ, ಬಾಹ್ಯ ಆಕಾರವನ್ನು ನೋಡಿ ತೀರ್ಮಾನಿ­ಸಬೇಡ, ಹೃದಯದ ನಿಷ್ಕಲ್ಮತೆಯನ್ನು ನೋಡು. ಆರು ಮಕ್ಕಳನ್ನು ನೋಡಿದ ಮೇಲೆ ಸಾಮ್ಯುವೆಲ್ ಕೇಳಿದ, ‘ಜೆಸ್ಸಿ, ನಿನ್ನ ಎಲ್ಲ ಮಕ್ಕಳೂ ಬಂದರೇ?’ ಜೆಸ್ಸಿ ಹೇಳುತ್ತಾನೆ, ‘ರಾಜನಾಗಬಹುದಾಗಿದ್ದ ಆರು ಜನ­ರನ್ನು ನೀವು ಕಂಡಿದ್ದೀರಿ.
ಇನ್ನೊಬ್ಬ ನಿರುಪಯೋಗಿ ಮಗ ಕಾಡಿ­ನಲ್ಲಿ ಕುರಿ ಮೇಯಿ­ಸಲು ಹೋಗಿದ್ದಾನೆ’. ‘ಅವನನ್ನೂ ಕರೆಎನ್ನುತ್ತಾನೆ ಸಾಮ್ಯುವೆಲ್. ಡೇವಿಡ್ ಬಂದು ಮುಂದೆ ನಿಂತ ತಕ್ಷಣ ಈತನೇ ಭಗವಂತ ನಿಯಮಿಸಿದ ಚಕ್ರ­ವರ್ತಿ ಎಂದು ಖಾತ್ರಿಯಾಗಿ ಅವನನ್ನೇ ಸಿಂಹಾಸನದ ಮೇಲೆ ಪ್ರತಿಷ್ಠಾಪಿಸುತ್ತಾನೆ. ಜನರು ನಮ್ಮನ್ನು ಅಳೆಯುವ ರೀತಿ, ಭಗವಂತ ನಮ್ಮನ್ನು ನೋಡುವ ರೀತಿ ಸಂಪೂರ್ಣ ಬೇರೆಯಾದದ್ದು. ಎಲ್ಲರೂ ನಮ್ಮನ್ನು ನಮ್ಮ ಹಣದಿಂದ, ಅಧಿಕಾರ­ದಿಂದ, ಜನಪ್ರಿಯತೆಯಿಂದ ಅಳೆದರೆ ಭಗವಂತ ನಮ್ಮನ್ನು ನಮ್ಮ ಹೃದಯದ ಶುದ್ಧತೆ­­ಯಿಂದ ಅಳೆಯುತ್ತಾನೆ.
ಉಳಿದ ವಿಷಯ­ಗಳು ಕೆಲಕಾಲ ಯಶಸ್ಸನ್ನು ನೀಡಿ­ದಂತೆ ಕಂಡರೂ ಕೊನೆಗೆ ಭಗವಂತನ ಆಯ್ಕೆಯೇ ನಿಲ್ಲುವುದು. ಆದ್ದರಿಂದ ಬದುಕಿ­ನಲ್ಲಿ ಜನ ತೋರುವ ತಿರಸ್ಕಾರ ಅಥವಾ ತೋರಿಕೆಯ ಆದರಕ್ಕೆ ಮನ ಸೋಲುವ ಬದಲು ಹೃದಯವನ್ನು ಆದಷ್ಟು ಶುದ್ಧವಾಗಿಟ್ಟುಕೊಳ್ಳುವು­ದರೆಡೆಗೆ ಮನ ನೀಡುವುದು ಕ್ಷೇಮ.