ನವಿಲು ಕೋಗಿಲೆಯಂತೆ ಹಾಡಲಾರದು, ಅಂತೆಯೇ ಕೋಗಿಲೆ ನವಿಲಿನಂತೆ ನಾಟ್ಯವಾಡದು, ಜಗತ್ತಿನಲ್ಲಿ ಪ್ರತಿಯೊಬ್ಬನಲ್ಲೂ ಒಂದೊಂದು ತೆರನಾದ ಸಾಮರ್ಥ್ಯವುಂಟು ತನ್ನಲ್ಲಿಲ್ಲದ ಸಾಮರ್ಥ್ಯಕ್ಕಾಗಿ ಕೊರಗದೇ, ಇದ್ದದ್ದನ್ನು ಉಪಯೋಗಿಸಿಕೊಳ್ಳುವುದೇ ಜಾಣತನ - "ಅರ್ಥರ್ ಸನ್ ಕ್ಲಾಸ್"

Tuesday, October 28, 2014

ಪಠ್ಯ ಪುಸ್ತಕ ಎಂಬ ಮಿಂಚಿನ ಬಳ್ಳಿ
[Nataraj Huliyar]
ನಮ್ಮ ಬೋಧನಾ ವಲಯದಲ್ಲಿ ಎಂಥೆಂಥ ಜಡ ಮನಸ್ಸುಗಳು ನುಸುಳಿವೆ ಎಂಬು­ದನ್ನು ನೋಡುತ್ತಿದ್ದರೆ ನಿಜಕ್ಕೂ ಆತಂಕವಾಗು­ತ್ತದೆ. ಕಾಲೇಜುಗಳಿಗೆ ಶೇಕ್ಸಪಿಯರ್ ನಾಟಕ­ವನ್ನೋ ನಾಟಕ ಭಾಗವನ್ನೋ ಪಠ್ಯವನ್ನಾಗಿಸಿ­ದರೆ, ಕಾಲದಲ್ಲಿ ಶೇಕ್್ಸಪಿಯರ್ ಅಪ್ರಸ್ತುತ ಎನ್ನುವ ನವ ಪಂಡಿತೋತ್ತಮರಿದ್ದಾರೆ! ಲಂಕೇಶ್ಅವರಮುಟ್ಟಿಸಿಕೊಂಡವನುಎಂಬ ಪರಿಣಾಮ­ಕಾರಿ ಕತೆಯನ್ನಿಟ್ಟರೆ, ಅದು ವಿವಾದವುಂಟು ಮಾಡು­ತ್ತದೆ ಎಂದು ರಾಗ ಎಳೆಯುವ ಅಧ್ಯಾಪಕ­ರಿದ್ದಾರೆ. ಕನ್ನಡ ಕವಿಗಳ ಅನುವಾದಗಳನ್ನು ಇಂಗ್ಲಿಷ್ ಪಠ್ಯದಲ್ಲಿಟ್ಟರೆ, ಅನುವಾದ­ಗಳು ಬೇಡ ಎನ್ನುವವರಿದ್ದಾರೆ; ಹೀಗೆನ್ನುವವರು ನಾವು ಓದು­ತ್ತಿ­ರುವ ರಷ್ಯನ್ ಹಾಗೂ ಫ್ರೆಂಚ್ ಪಠ್ಯಗಳೆಲ್ಲ ಇಂಗ್ಲಿ­ಷಿಗೆ ಅನುವಾದಗೊಂಡವು ಎಂಬ ಬಗ್ಗೆ ಜಾಣ ಮರೆವು ತೋರುತ್ತಾರೆ; ಹೊಸ ಲೇಖಕಿ­ಯೊಬ್ಬರ ಒಳ್ಳೆಯ ಕತೆಯನ್ನು ಪಠ್ಯದಲ್ಲಿ ಸೇರಿಸಿ ಎಂದರೆಅವರ ಬಗ್ಗೆ ನೋಟ್ಸ್ ಸಿಗುವುದಿಲ್ಲ, ಬೇಡಎನ್ನುವವರಿದ್ದಾರೆ!
ಈಚೆಗೆ ಬಂದಿರುವ ಪಿಯುಸಿ ಹೊಸ ಇಂಗ್ಲಿಷ್ ಪಠ್ಯಪುಸ್ತಕದಲ್ಲಿ ಶೇಕ್­ಪಿಯರನರೋಮಿಯೋ ಜೂಲಿಯೆಟ್ನಾಟಕದ ಎರಡು ಕೋಮಲ ಭಾಗ­ಗಳಿವೆ. ಅಧ್ಯಾಪಕ­ರೊಬ್ಬರು ಪ್ರೀತಿಯ ಸ್ವಗತಗಳನ್ನು ಹದಿಹರೆಯದ ಹುಡುಗ ಹುಡುಗಿ­ಯರಿಗೆ ಹೇಗೆ ಪಾಠ ಮಾಡುವುದು?’ ಎಂದು ಆತಂಕದಿಂದ ಕೇಳಿದಾಗ ಅಚ್ಚರಿಯಾಯಿತು. ಜೀವನ ಪ್ರೀತಿಯುಳ್ಳ ಎಲ್ಲ ಅಧ್ಯಾಪಕ, ಅಧ್ಯಾಪಕಿ­ಯರೂ ಉತ್ಸಾಹದಿಂದ ಚರ್ಚಿಸಬಲ್ಲ ರಮ್ಯ ಭಾಗವಿದು. ‘ರೋಮಿಯೋ ಜೂಲಿಯೆಟ್ನಾಟ­ಕದಲ್ಲಿ ಜೂಲಿಯೆಟ್ಟಳ ಸೌಂದರ್ಯವನ್ನು ಮೊದಲ ಬಾರಿಗೆ ಕಂಡು ನಿಬ್ಬೆರ­ಗಾಗುವ ರೋಮಿಯೋನಲ್ಲಿ ವಿಸ್ಮಯ ಉಕ್ಕುತ್ತದೆ. ಉತ್ಕಟ ಭಾಗದ ಸರಳ ಅನುವಾದ: ‘ಓಹ್! ಅವಳು ದೀವಟಿಗೆಗಳಿಗೆ ಮತ್ತಷ್ಟು ಉಜ್ವಲವಾಗಿ ಬೆಳಗುವುದನ್ನು ಕಲಿಸುವಳು; ಅವಳು ಇರುಳ ಕೆನ್ನೆಯ ಮೇಲೆ ತೂಗುವಳು- ಇಥಿಯೋಪಿಯಾದ ಕರಿಯನ ಕಿವಿಯ ಶ್ರೀಮಂತ ಒಡವೆಯ ಹಾಗೆ; ಲೋಕದ ಬಳಕೆಗಲ್ಲ ಅವಳ ಚೆಲುವು; ಕಾಗೆಗಳ ನಡುವೆ ಬಿಳಿ ಪಾರಿವಾಳ ಮಿಂಚುವ ಹಾಗೆ ಅವಳು ಹೆಂಗಳೆ­ಯರ ನಡುವೆ ಮಿಂಚುವಳು; ಅವಳ ನಾಟ್ಯ ಮುಗಿದ ಮೇಲೆ ಅವಳು ನಿಂತ ತಾಣವನು ದಿಟ್ಟಿಸುವೆನು; ಅವಳ ಕೈ ಮುಟ್ಟಿ ನನ್ನೀ ಒರಟು ಕೈಗಳನು ಹರಸಿ­ಕೊಳ್ಳುವೆನು. ತನಕ ಹೃದಯ ಪ್ರೀತಿಸಿತ್ತೇ? ದೃಷ್ಟಿಯೇ! ಅದನ್ನೆಲ್ಲ ತೊರೆದು­­ಬಿಡು! ರಾತ್ರಿಯ ತನಕ ಅಸಲಿ ಚೆಲುವನ್ನು ನಾ ಕಂಡಿರಲಿಲ್ಲ!’
ಆನಂತರ ರೋಮಿಯೋ, ಜೂಲಿಯೆಟ್ ನಡುವೆ ಪ್ರೀತಿ ಮೊಳೆಯು­ತ್ತದೆ. ಮುಂದಿನ ದೃಶ್ಯ­ವೊಂದರಲ್ಲಿ ಜೂಲಿಯೆಟ್ ಉತ್ಕಟವಾಗಿ ರಾತ್ರಿ­ಯನ್ನು ಬೇಡಿಕೊಳ್ಳುತ್ತಾಳೆ: ‘ಬಾ ಕೋಮಲ ರಾತ್ರಿಯೆ ಬಾ; ಬಾ ರೋಮಿಯೋ ಬಾ; ಬಾ ರಾತ್ರಿಯ ಹಗಲೆ ಬಾ. ಕಾಗೆಯ ಮೇಲೆ ಹರಡಿದ ಹಿಮಕ್ಕಿಂತ ಬಿಳುಪಾಗಿ ಇರುಳ ರೆಕ್ಕೆಯ ಮೇಲೆ ರೋಮಿಯೋ ನೀ ಬರುವೆ; ಬಾ ಕೋಮಲ ರಾತ್ರಿಯೇ ಬಾ; ಬಾ ಕರಿ ಹುಬ್ಬಿನ ರಾತ್ರಿಯೆ ಬಾ; ನನಗೆ ನನ್ನ ರೋಮಿಯೋ ಕೊಡು; ಅವನು ಸತ್ತಾಗ ಅವನನ್ನು ಪುಟ್ಟ ತಾರೆಗಳಂತೆ ಕತ್ತರಿಸು; ಆಗ ಅವನು ಸ್ವರ್ಗದ ಮುಖವನು ಫಳಫಳ ಹೊಳೆ­ವಂತೆ ಮಾಡುವನು; ಆಗ ಜಗವೆಲ್ಲ ರಾತ್ರಿ­ಯನು ರಮಿಸು­ವುದು; ಕಣ್ಣು ಕುಕ್ಕುವ ಸೂರ್ಯನನು ಪೂಜಿಸುವುದ ಕೈಬಿಡುವುದು...’
ಓದಿದಾಗ, ಅಭಿನಯಿಸಿದಾಗ ಎಲ್ಲ ಜೀವಂತ ಮನುಷ್ಯರೂ ತೀವ್ರವಾಗಿ ಮಿಡಿಯುವ ಭಾಗ­ಗಳಿವು. ಇದರ ಬಗ್ಗೆ ವಿದ್ಯಾರ್ಥಿ, ವಿದ್ಯಾರ್ಥಿನಿ­ಯರು ಏನು ಹೇಳಬಹುದೆಂಬ ಕುತೂಹಲ ನನ­ಗಿತ್ತು. ಅವರಲ್ಲಿ ಅನೇಕರು ವರ್ಣನೆಯನ್ನು ಓದಿ ಪುಳಕಗೊಂಡಿದ್ದರು. ಇಲ್ಲೇ ಇನ್ನೊಂದು ಘಟನೆಯನ್ನೂ ಹೇಳಿಬಿಡ­ಬೇಕು. ನಾವು ಪಠ್ಯಕ್ಕೆ ಬರಹಗಳನ್ನು ಆಯ್ಕೆ ಮಾಡುತ್ತಿರುವಾಗ, ಅದೇ ಆಗ ಮೊದಲ ಪಿಯುಸಿ ಮುಗಿಸಿದ್ದ ವಿದ್ಯಾರ್ಥಿನಿ­ಯೊಬ್ಬಳು ಎರಡನೆಯ ಪಿಯುಸಿಗೆ ಯಾವ ಪಠ್ಯವನ್ನು ಆಯ್ಕೆ ಮಾಡುತ್ತಾರೋ ಎಂಬ ಕುತೂಹಲ­ದಿಂದ ಅಲ್ಲಿಗೆ ಬಂದಳು. ಈಗಾ­ಗಲೇ ಹುಡುಗಿ ಓದಿದ್ದ ಮೊದಲ ಪಿಯುಸಿ ಪಠ್ಯದ ಬಗ್ಗೆ ನಾವು ಅವಳ ಅಭಿಪ್ರಾಯ ಕೇಳಿದಾಗ ಅವಳು ಥಟ್ಟನೆ ಕೊಟ್ಟ ಉತ್ತರ: ‘ಪುಸ್ತಕದ ಮೊದಲ ಎರಡು ಮೂರು ಪಾಠಗಳಲ್ಲಿ ನಮ್ಮನ್ನು ಬರೀ ಅಳಿಸುತ್ತೀರಿ. ನಮ್ಮನ್ನು ಚಿಯರಪ್ ಮಾಡುವ ಪಠ್ಯಗಳು ಕೂಡ ನಮಗೆ ಬೇಕು.’
ಪಠ್ಯಪುಸ್ತಕ ರೂಪಿಸುವವರು ಸೂಕ್ಷ್ಮ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಮಾತು­ಗಳನ್ನು ಕೇಳಿಸಿಕೊಳ್ಳುವುದು ತುಂಬಾ ಮುಖ್ಯ ಎಂಬು­ದನ್ನು ಪ್ರತಿಕ್ರಿಯೆ ಸೂಚಿಸುತ್ತದೆ. ಪಠ್ಯಪುಸ್ತಕ­ದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಂತಮ್ಮ ವಯಸ್ಸಿಗೆ ತಕ್ಕಂತೆ ಸ್ಪಂದಿಸಬಲ್ಲ ಬರಹ­ಗಳೂ ಇರಬೇಕೆಂಬುದು ನಮಗೆಲ್ಲ ಮತ್ತೆ ಖಾತ್ರಿಯಾಗ­ತೊಡಗಿತು. ಪಠ್ಯಪುಸ್ತಕ­ಗಳನ್ನು ಮಾಡುವವರು ವಿದ್ಯಾರ್ಥಿಗಳೂ ಬೋಧಕರೂ ತೊಡಗಿ ಬೆಳೆಸ­ಬಲ್ಲ ಕೃತಿಗಳನ್ನು ಆಯ್ಕೆ ಮಾಡುವ ಬಗ್ಗೆ ಸರಿ­ಯಾಗಿ ಯೋಚಿಸುವಂತೆ ಕಾಣುವು­ದಿಲ್ಲ. ಸಾಹಿತ್ಯ ಪಠ್ಯವೆಂದರೆ ವಿವಿಧ ಸ್ವರ ಮೇಳಗಳ ಆರ್ಕೆಸ್ಟ್ರಾ­ದಂತೆ; ಅಲ್ಲಿ ಮಕ್ಕಳನ್ನು ಬದುಕಿಗೆ ಅಣಿಗೊಳಿಸ­ಬಲ್ಲ ಲೇಖನಗಳು ಬೇಕು; ಮಾನವ ವರ್ತನೆ­­ಳನ್ನು, ಸಮಾಜವನ್ನು ಗ್ರಹಿಸುವ ಕತೆ­ಗಳು ಬೇಕು; ಭಾಷೆಯ ಅನಂತ ಸಾಧ್ಯತೆ­ಗಳನ್ನು ಹೇಳಿಕೊಡುವ ಪದ್ಯಗಳು ಬೇಕು. ಹೀಗೆ ಅನೇಕ ಬಗೆಯ ಅಗತ್ಯ­ಗಳು ಸಾಹಿತ್ಯದ ಪಠ್ಯಕ್ಕಿರುತ್ತವೆ.
ಆದ್ದರಿಂದಲೇ ಕ್ಲಾಸ್ ರೂಮಿನಲ್ಲಿ ಒಂದು ಪಠ್ಯ­ಪುಸ್ತಕದ ಬಗೆಬಗೆಯ ಪಾಠ­ಗಳನ್ನು ಹೇಳಿ­ಕೊಡು­ವವರು ಹಲಬಗೆ­ಯಲ್ಲಿ ಪರಕಾಯ ಪ್ರವೇಶ­ಗಳನ್ನು ಮಾಡು­ತ್ತಿರಬೇಕಾಗುತ್ತದೆ. ಕೆಲವು ಬಗೆಯ ಪಠ್ಯಗಳನ್ನಾದರೂ ತೀವ್ರವಾಗಿ ಅನುಭವಿಸುತ್ತಿರಬೇಕಾಗುತ್ತದೆ. ತಾವು ಬೋಧಿ­ಸುವ ಪಠ್ಯವನ್ನು ಪ್ರೀತಿಸಲಾರದ­ವರು ವಿದ್ಯಾರ್ಥಿ­ಗಳನ್ನೂ ತರಗತಿಗಳನ್ನೂ ಮಂಕಾಗಿಸುತ್ತಿರುತ್ತಾರೆ. ಅಷ್ಟೇ ಅಲ್ಲ, ಪಠ್ಯಗಳನ್ನು ಆಯ್ಕೆ ಮಾಡುವವರ ಪೂರ್ವಗ್ರಹಗಳು ಕೂಡ ಪಠ್ಯಪುಸ್ತಕ­ಗಳನ್ನು ಜಡ­ಗೊಳಿಸುತ್ತವೆ. ಈಚೆಗೆ ಒಂದು ಪಠ್ಯಪುಸ್ತಕ ಸಮಿತಿ­ಯಲ್ಲಿ ಲಂಕೇಶ ಅವರಮುಟ್ಟಿಸಿಕೊಂಡವನುಕತೆಯನ್ನು ಕೆಲವರು ಸೂಚಿಸಿದರೆ, ಅದು ವಿವಾದ ಸೃಷ್ಟಿಸುತ್ತದೆ ಎಂದು ಕೆಲವರು ಹಾರಾಡ­ತೊಡಗಿ­ದರು. ಕತೆಯಲ್ಲಿ ಲಿಂಗಾಯತ ಜಾತಿಯ ಬಸಲಿಂಗ ತನ್ನ ಎಡಗಣ್ಣಿಗೆ ತೊಂದರೆಯಾದಾಗ ತಿಮ್ಮಪ್ಪ ಎಂಬ ದಲಿತ ಡಾಕ್ಟರ ಬಳಿ ಹೋಗು­ತ್ತಾನೆ. ಅವನ ಕಣ್ಣಿನ ಆಪರೇಷನ್ ಆದ ಎರಡು ವಾರ ತಲೆಗೆ ನೀರು ಹಾಕದಿರಲು ಡಾಕ್ಟರು ಹೇಳುತ್ತಾರೆ; ಆದರೆ ಬಸಲಿಂಗನ ಜಾತಿಪೀಡಿತ ಮನಸ್ಸು ಮಾತನ್ನು ಕೇಳಿಸಿಕೊಳ್ಳದೇ ಹೋಗು­ತ್ತದೆ; ಅವನು ಮೈಲಿಗೆ ಕಳೆದುಕೊಳ್ಳಲು ಸ್ನಾನ ಮಾಡುತ್ತಾನೆ. ಸೋಂಕು ತಗುಲಿ ಕಣ್ಣು ಕಳೆದು­ಕೊಳ್ಳುತ್ತಾನೆ. ಮುಂದೆ ಅವನ ಬಲಗಣ್ಣಿಗೂ ತೊಂದರೆಯಾದಾಗ ಯಾವ ಡಾಕ್ಟರ ಬಳಿಯೂ ಅದಕ್ಕೆ ಪರಿಹಾರ ಸಿಗದೆ ಮತ್ತೆ ಅವನು ತಿಮ್ಮಪ್ಪ­ನವರ ಬಳಿಯೇ ಹೋಗಬೇಕಾಗುತ್ತದೆ. ತಿಮ್ಮಪ್ಪ ಮರುಕದಿಂದ ಮತ್ತೊಂದು ಕಣ್ಣಿಗೂ ಆಪರೇ­ಷನ್ ಮಾಡಿ ಸಲವಾದರೂ ನಾನು ಹೇಳಿ­ದಂತೆ ಮಾಡು, ತಕ್ಷಣ ಸ್ನಾನ ಮಾಡಬೇಡಎಂದು ಎಚ್ಚರಿಸಿ ಅವನ ಕಣ್ಣನ್ನು ಉಳಿಸು­ತ್ತಾರೆ. ಅಸ್ಪೃಶ್ಯತೆಯನ್ನು ಆಚರಿಸುವ ಮತಿಹೀನ ಭಾರತ ತನ್ನ ಕಣ್ಣನ್ನೇ ಕಳೆದು­ಕೊಳ್ಳುವುದನ್ನು ತೀವ್ರವಾಗಿ ಹೇಳುವ ಕತೆಯನ್ನು ಪಠ್ಯಪುಸ್ತಕದಲ್ಲಿ ಓದಿದ ಎಲ್ಲ ಜಾತಿಯ ಮಕ್ಕಳೂ ಅದರ ಸಂದೇಶವನ್ನು ಗ್ರಹಿಸಿರುವ ಉದಾಹರಣೆಗಳಿವೆ. ಆದರೆ ಮಕ್ಕಳಿಗಿ­ರುವ ಮುಕ್ತತೆ ಮೇಷ್ಟ್ರುಗಳಿಗೆ ಇಲ್ಲದಿರುವುದು ಆತಂಕ ಹುಟ್ಟಿಸುತ್ತದೆ.
ಆದ್ದರಿಂದಲೇ ಮಕ್ಕಳ ಮನಸ್ಸಿನಲ್ಲಿ­ರುವ ಜಾತಿಯ ಕೊಳೆಯನ್ನು ತೊಳೆಯ­ಲೆತ್ನಿಸುವಮುಟ್ಟಿಸಿ­ಕೊಂಡವನುಥರದ ಕತೆಯೂ ಪಠ್ಯ­ಪುಸ್ತಕದಲ್ಲಿ ಇರ­ಬೇಕು. ಹಾಗೆಯೇ ಹದಿಹರೆ­ಯದ ಮೀರು­ವಿ­ಕೆಯನ್ನು ಹಾಗೂ ಮಧುರ­ವಾದ ಮೂಡನ್ನು ಸೃಷ್ಟಿಸುವ ರೋಮಿಯೋ ಜೂಲಿ­ಯೆಟ್ ಸ್ವಗತಗಳ ತೀವ್ರ ಭಾವಗೀತೆಯೂ ಅಲ್ಲಿರ­ಬೇಕು. ಅದರಲ್ಲೂ ಒಬ್ಬರನ್ನೊಬ್ಬರು ದ್ವೇಷಿ­ಸುವ ಎರಡು ಕುಟುಂಬಗಳಿಗೆ ಸೇರಿದ ರೋಮಿಯೋ- ಜೂಲಿಯೆಟ್ ತಮ್ಮ ಮುಗ್ಧ ಪ್ರೀತಿಯಿಂದಲೇ ದ್ವೇಷದ ಗೋಡೆ­ಗಳನ್ನು ದಾಟುವುದರಿಂದ ಪದ್ಯ ಭಾಗಗಳಿಗೆ ಸಾಮಾಜಿಕ ಮಹತ್ವವೂ ಇದೆ. ಪಾಠ ಹೇಳುವವರು ಅದನ್ನೂ ಹೇಳಿ­ಕೊಡ­ಬೇಕಾಗುತ್ತದೆ. ಒಂದು ತರಗತಿ­ಯಲ್ಲಿ ಪಾಠ ಮಾಡು­ವವರು ವಿವಿಧ ಬಗೆಯ ಮೂಡುಗಳನ್ನು ಸೃಷ್ಟಿಸು­ತ್ತಿರಬೇಕಾಗುತ್ತದೆ. ಹಾಗೆಯೇ ಹುಡುಗ, ಹುಡುಗಿಯರ ಕೈಯಲ್ಲಿರುವ ಪುಸ್ತಕ­ಗಳು ಅವ­ರಲ್ಲಿ ಪ್ರೀತಿ, ಕುತೂಹಲ ಹುಟ್ಟಿ­ಸು­ವಂತೆ ಆಕ­ರ್ಷ­ಕವಾಗಿ ಇರ­ಬೇಕಾ­ಗು­ತ್ತದೆ. ದೃಷ್ಟಿಯಿಂದ ನೋಡಿದಾಗ ಸಲದ ಪಿಯುಸಿ ಇಂಗ್ಲಿಷ್ ಪಠ್ಯದಲ್ಲಿ ಖ್ಯಾತ ಕಲಾವಿದ ಪ್ರಕಾಶಬಾಬು ರಚಿ­ಸಿದ ಚಿತ್ರಗಳು, ಹೊಸ ವಿನ್ಯಾಸ ಹಾಗೂ ಮುದ್ರಣ ಎಲ್ಲವೂ ಆಕರ್ಷಕವಾಗಿವೆ. ಕಳೆದ ವರ್ಷ ಬೆಳ­ಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಪದವಿ ತರಗತಿಗಳಿಗಾಗಿ ಹೊರತಂದ ಕನ್ನಡ ಪಠ್ಯಗಳ ಆಯ್ಕೆಯ ವೈವಿಧ್ಯ, ದಕ್ಷತೆ, ವಿನ್ಯಾಸ ಹಾಗೂ ಮುದ್ರಣಗಳ ಸೌಂದರ್ಯ ಕಂಡಾಗ ಕೂಡ ಇಷ್ಟೇ ಆನಂದವಾಗಿತ್ತು. ಪಠ್ಯಪುಸ್ತಕ­­ಳನ್ನು ಕೈಯಲ್ಲಿ ಹಿಡಿಯಲಾಗದಂತೆ ಮುದ್ರಿಸು­ವುದು ತಮ್ಮ ಆಜನ್ಮಸಿದ್ಧ ಹಕ್ಕೆಂಬಂತೆ ತಿಳಿದಿರುವ ಸರ್ಕಾರಿ ಸಂಸ್ಥೆಗಳು ಬಗೆಯ ಪುಸ್ತಕಗಳನ್ನು ಕೊಂಚ ಕಣ್ಣು ಬಿಟ್ಟು ನೋಡಬೇಕು.
ಅದೇ ವೇಳೆಗೆ ಹಲವು ತಲೆಮಾರುಗಳ ಸಂವೇ­ದನೆ, ಅಭಿರುಚಿಗಳನ್ನು ಪೊರೆಯುವ ಪಠ್ಯಗಳನ್ನು ರೂಪಿಸುವವರು ಅತ್ಯಂತ ಜವಾಬ್ದಾರಿ­ಯಿಂ­ದಲೂ ಇರಬೇಕಾಗುತ್ತದೆ. ಹಿಂದೊಮ್ಮೆ ವಿಶ್ವ­ವಿದ್ಯಾಲಯವೊಂದರ ಪಠ್ಯಪುಸ್ತಕಗಳಲ್ಲಿ ಕನ್ನಡದ ಶ್ರೇಷ್ಠ ಲೇಖಕ ಲೇಖಕಿಯರಿಗೂ ಜಾಗವಿರಲಿಲ್ಲ. ಕಾರಣ, ಆಯ್ಕೆ ಸಮಿತಿಯಲ್ಲಿದ್ದವರು ತಮ್ಮ ಬರಹಗಳಿಂದ ಪಠ್ಯವನ್ನು ತುಂಬಿಸಿಬಿಟ್ಟಿದ್ದರು!
ನಾನೊಂದು ಸಂದರ್ಶನದಲ್ಲಿ ಒಂದು ವಿಶ್ವ­ವಿದ್ಯಾಲಯದಿಂದ ಕನ್ನಡ ಎಂ. ಪದವಿ ಪಡೆದ ವಿದ್ಯಾರ್ಥಿಯೊಬ್ಬನನ್ನು ಕನ್ನಡ ಕಾದಂಬರಿ ಪರಂಪ­ರೆಯ ಬಗ್ಗೆ ಕೇಳಿದರೆ, ಆತ ಕಾರಂತ, ಕುವೆಂಪು ಅವರ ಕಾದಂಬರಿಗಳನ್ನೇ ಓದಿರಲಿಲ್ಲ. ಯಾಕೆ ಎಂದರೆ ಅವನ ಉತ್ತರ: ‘ಅವು ನಮ್ಮ ಸಿಲಬಸ್ಸಿನೊಳಗೆ ಇರಲಿಲ್ಲ.’ ಮುಂದೆ ಅಧ್ಯಾಪಕ­ನಾಗಲಿರುವ ಆತ ಕನ್ನಡದ ದೊಡ್ಡ ಲೇಖಕರನ್ನೇ ಓದದಂತೆ ಅವನ ಅಧ್ಯಾಪಕರು ನೋಡಿ­ಕೊಂಡಿ­ದ್ದರು! ಕನ್ನಡದ ಶ್ರೇಷ್ಠ ಲೇಖಕ, ಲೇಖಕಿಯರನ್ನು ಓದದೆ ಕನ್ನಡ ಸಾಹಿತ್ಯದ ಪದವಿ ಪಡೆದವನೊಬ್ಬ ಮುಂದೆ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಬಗ್ಗೆ ಎಂಥ ಅಭಿರುಚಿ ಮೂಡಿಸಬಹುದೆಂಬುದನ್ನು ಸುಲಭ­ವಾಗಿ ಊಹಿಸಬಹುದು.
ಕೊನೆ ಟಿಪ್ಪಣಿ: ಹುಡುಗ ಹುಡುಗಿಯರ ಮುಗ್ಧತೆ ಮತ್ತು ಮೇಷ್ಟರ ಸಿನಿಕತೆಗೆ ಉದಾ­ಹರಣೆ ಎಂದರೆ, ನಾನು ಬಿ.. ಓದುತ್ತಿದ್ದಾಗ ಕವಿ ಬೇಂದ್ರೆ ತೀರಿಕೊಂಡರು. ಆಗ ಮಿತ್ರನೊಬ್ಬಇದೇನಿದು! ಬೇಂದ್ರೆ ಈಗ ತೀರಿಕೊಂಡರೆ? ಅವರು ನಮ್ಮ ಟೆಕ್ಸ್ಟ್ ಬುಕ್ಕಿನಲ್ಲಿ ಇದ್ದರಲ್ಲ?’ ಎಂದ ಮುಗ್ಧವಾಗಿ. ಇದೇಕೆ ಪ್ರಶ್ನೆ ಕೇಳುತ್ತಿದ್ದಾನೆ ಎಂದು ನೋಡಿದರೆ, ‘ಅಯ್ಯೋ! ಸಾಮಾನ್ಯವಾಗಿ ಟೆಕ್ಸ್ಟ್ ಬುಕ್ಕಿನಲ್ಲಿ ಇದ್ದವರೆಲ್ಲ ತೀರಿಕೊಂಡಿರುತ್ತಾರೆ ಎಂದುಕೊಂಡಿದ್ದೆಎಂದ!
ಥರದ ಮುಗ್ಧರಂತೆಯೇ ಪಠ್ಯಪುಸ್ತಕಗಳ ಮೂಲಕ ಮಾತ್ರ ದೊಡ್ಡ ಲೇಖಕಲೇಖಕಿ­­ರನ್ನು ಓದಿದವರಿದ್ದಾರೆ. ಅದರಲ್ಲೂ ಬಾಲ್ಯದಲ್ಲಿ ಓದಿದ ಪಠ್ಯಗಳು ಮಕ್ಕಳಲ್ಲಿ ಸಾಹಿತ್ಯದ ಹಸಿವನ್ನು ಹೆಚ್ಚಿಸುತ್ತಿರುತ್ತವೆ. ನನ್ನ ಬಾಲ್ಯದಲ್ಲಿ ರಜೆಯಲ್ಲಿ ಓದಲು ಹೊಸ ಪುಸ್ತಕಗಳು ಸಿಗದೆ ಸೀನಿಯರ್ ವಿದ್ಯಾರ್ಥಿಗಳ ಕನ್ನಡ ಪಠ್ಯಗಳನ್ನೆಲ್ಲ ಓದಿಬಿಡುತ್ತಿ­ದ್ದುದು ನೆನಪಾಗುತ್ತದೆ. ಅಲ್ಲಿ ಅಕಸ್ಮಾತ್ ಕಣ್ಣಿಗೆ ಬಿದ್ದ ಬೆಸಗರಹಳ್ಳಿ ರಾಮಣ್ಣನವರ ಕತೆಯಲ್ಲಿ ಹಳ್ಳಿಯ ಎಲ್ಲರಿಂದಲೂ ಕುರಿನಂಜ ಎಂದು ಕಿಚಾ­ಯಿಸಿಕೊಳ್ಳುತ್ತಿದ್ದ ಮರಿನಂಜ, ಕತೆಯ ಕೊನೆಗೆನಿಮ್ಮಪ್ಪ ಕುರಿನಂಜಎಂದು ರೇಗಿ ಕುಡಗೋಲು ಎತ್ತುವ ಭಾಗ ನನ್ನಲ್ಲಿ ಪುಳಕದ ಜೊತೆಗೆ ಬಂಡಾ­ಯದ ಧೋರಣೆಯನ್ನೂ ಹುಟ್ಟಿಸಿಬಿಟ್ಟಿತ್ತು.
ಇಂಥ ಉದಾಹರಣೆಗಳು ಎಲ್ಲರ ಬದುಕಿ­ನಲ್ಲೂ ಇರುತ್ತವೆ. ಬೆಂಗಳೂರು ವಿಶ್ವವಿದ್ಯಾ­ಲಯದ ಪಠ್ಯದಲ್ಲಿದ್ದ ಶಿವರಾಮ ಕಾರಂತರನಮ್ಮ ಅಳತೆಯನ್ನು ಮೀರಲಾಗದ ದೇವರುಎಂಬ ಲೇಖನ ಓದಿ ವಿಚಾರವಂತರಾದ ವಿದ್ಯಾ­ರ್ಥಿಗಳಿದ್ದಾರೆ. ತಮ್ಮ ಭಾಷಾ ಪಠ್ಯದಲ್ಲಿ ಮೊದಲ ಬಾರಿಗೆ ಕತೆ, ಪದ್ಯ ಓದಿ ಬರವಣಿಗೆಯ ಕಲೆ ಕಲಿತವರಿದ್ದಾರೆ. ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಬಗೆಬಗೆಯ ಎನರ್ಜಿಗಳನ್ನು ಹೊರಚಿಮ್ಮಿಸುತ್ತಿ­ರು­ತ್ತವೆ. ಆದ್ದರಿಂದ ಪಠ್ಯಪುಸ್ತಕ ರೂಪಿಸುವವರಿಗೆ ಹಾಗೂ ಬೋಧಿಸುವವರಿಗೆ ತಾವು ನಿಜಕ್ಕೂ ನಾಡು ಕಟ್ಟುವ ಕೆಲಸ ಮಾಡುತ್ತಿದ್ದೇವೆ ಎಂಬ ಬಗ್ಗೆ ಆಳವಾದ ನಂಬಿಕೆ ಇರುವುದು ಒಳ್ಳೆಯದು. ಸಿನಿಕತನದಿಂದ ಯಾವ ಹೊಸತೂ ಹುಟ್ಟುವುದಿಲ್ಲ ಮತ್ತು ಇರುವ ಒಳ್ಳೆಯದೂ ನಾಶವಾಗುತ್ತದೆ ಎಂಬ ಸರಳ ಸತ್ಯವನ್ನು ನಾವು ಮರೆಯಬಾರದು.

No comments: